ಪ್ರಚೋದಕ
 	ಯಾವುದೇ ಇಂದ್ರಿಯಕ್ಕೆ ತಾಗಿ ಅದನ್ನು ಕ್ರಿಯಾಶೀಲವಾಗಿಸುವ ಭೌತಶಕ್ತಿ ಪ್ರಕಾರ (ಸ್ಟಿಮ್ಯುಲೆಂಟ್). ಉದಾಹರಣೆಗೆ ಬೆಳಕಿನ ಕಿರಣಗಳು ಅಥವಾ ಶಬ್ದತರಂಗಗಳು.  ಮನೋವೈಜ್ಞಾನಿಕವಾಗಿ, ಪ್ರಚೋದಕದ ಅರ್ಥ ಹೆಚ್ಚು ವಿಶಾಲ. ಜೀವಿಯ ದೈಹಿಕ ಮತ್ತು ಮಾನಸಿಕ ಸ್ಥಿತಿಗತಿಗಳ ಮೇಲೆ ಪ್ರಭಾವ ಬೀರಿ ಅವನನ್ನು ಒಂದಲ್ಲ ಒಂದು ರೀತಿಯಲ್ಲಿ ಕ್ರಿಯಾಶೀಲನನ್ನಾಗಿಸುವ ಯಾವುದೇ ಶಕ್ತಿ ಅಥವಾ ಕ್ರಿಯೆಯಾದರೂ ಪ್ರಚೋದಕವೆನಿಸುತ್ತದೆ. ಅಂಥ ಶಕ್ತಿ ಅಥವಾ ಕ್ರಿಯೆ ಭೌತಿಕ, ಶಾರೀರಿಕ, ಸಾಮಾಜಿಕ ಅಥವಾ ಮಾನಸಿಕ ಆಗಿರಬಹುದು ಅಥವಾ ಅವುಗಳ ಮಿಶ್ರರೂಪ ಆಗಿರಬಹುದು (ಉದಾ : ಕ್ರಮವಾಗಿ - ಸುಗಂಧ, ಹೃದಯದ ಬಡಿತ, ಸಾಮಾಜಿಕ ಮೌಲ್ಯ, ನೆನಪು ಮತ್ತು ಗಾಯದಿಂದಾಗುವ ನೋವು). 
ಇಂದ್ರಿಯ ಪ್ರಚೋದಕಗಳು ಸಾಮಾನ್ಯವಾಗಿ ಬಾಹ್ಯ ವಸ್ತು ಘಟನೆಗಳಿಂದ ಉದ್ಭವಿಸುವುದರಿಂದ ಭೌತಿಕ ಪ್ರಚೋದಕಗಳೆನಿಸುತ್ತವೆ. ಅವು ನಾನಾ ರೂಪದಲ್ಲಿರುತ್ತವೆ. ದೃಷ್ಟಿಯ ಸೂಕ್ಷ್ಮ ಪ್ರಚೋದಕಗಳೆಂದರೆ ವಿದ್ಯುತ್ ಕಾಂತ ತರಂಗಗಳು. ವಿಶ್ವವನ್ನೇ ತುಂಬಿರುವ ಈ ದೇದೀಪ್ಯಮಾನ ತರಂಗಗಳ ಉದ್ದದಲ್ಲಿ ವ್ಯಾಪಕ ವ್ಯತ್ಯಾಸವಿರುತ್ತದೆ. ಆದರೆ, ನಮ್ಮ ದೃಷ್ಟಿಯನ್ನು ಪ್ರಚೋದಿಸುವ ಉದ್ದದ ಅಂತರ ಸಾಪೇಕ್ಷವಾಗಿ ಬಹಳ ಸೀಮಿತ (400-700 ಮಿಲಿಮೈಕ್ರೋನ್ಸ್). ಈ ತರಂಗಗಳಿಂದಲೆ ನಾವು ವೈವಿಧ್ಯಪೂರ್ಣವಾದ ವರ್ಣ ಮತ್ತು ಅವರ್ಣ ಸಂವೇದನೆಗಳನ್ನು ಪಡೆಯುತ್ತೇವೆ. ಶ್ರವಣ ಸಂವೇದನೆಯ ಪ್ರಚೋದಕಗಳು ಮೂಲತಃ ಸೂಕ್ಷ್ಮರೂಪದ ಶಬ್ದತರಂಗಗಳು. ಒಂದು ವಸ್ತುವಿನಲ್ಲಿ ಸ್ಪಂದನವುಂಟಾದಾಗ (ಉದಾ : ವೀಣೆಯ ತಂತಿಯನ್ನು ಮಿಡಿದಾಗ ಆಗುವ ಸ್ಪಂದನ) ಶಬ್ದ ತರಂಗಳು ಉದ್ಭವಿಸಿ, ಆವರ್ತಗಳಾಗಿ ಗಾಳಿಯ ಮೂಲಕ ಎಲ್ಲ ದಿಕ್ಕುಗಳಿಗೂ ಪ್ರಸಾರವಾಗುತ್ತವೆ. ಈ ತರಂಗಾವರ್ತಗಳು ಕಿವಿಯ ಪೊರೆಯನ್ನು ತಟ್ಟಿದಾಗ ಶಬ್ದಪ್ರಚೋದನೆ ಉಂಟಾಗುತ್ತದೆ. ಶಬ್ದ ತರಂಗಗಳ ಆವರ್ತ ಸಂಖ್ಯೆ ಬಹಳ ವಿಸ್ತಾರವಾದ್ದು. ನಮಗೆ ಶ್ರವಣ ಸಾಧ್ಯ ಶಬ್ದದಲ್ಲಿನ ತರಂಗಗಳ ಆವರ್ತಾಂತರ ಸಾಪೇಕ್ಷವಾಗಿ ಬಹಳ ಸಂಕುಚಿತ (ಸೆಕೆಂಡಿಗೆ 20 ರಿಂದ 20,000 ಆವರ್ತಗಳು). ಈ ಅಂತರದಲ್ಲಿಯೆ ನಾವು ವೈವಿಧ್ಯಪೂರ್ಣ ಶ್ರವಣಾನುಭವವನ್ನು (ನಾದಗುಣ, ಬಡಿತ, ಶೃತಿ, ಅಪಶೃತಿ, ಗದ್ದಲ ಇತ್ಯಾದಿ) ಪಡೆಯುತ್ತೇವೆ. ಇದೇ ರೀತಿ, ರಾಸಾಯನಿಕ ದ್ರವ್ಯಗಳು ರುಚಿ ಮತ್ತು ವಾಸನೆಗಳಿಗೆ ಭೌತ ಪ್ರಚೋದಕಗಳೆನಿಸಿದರೆ, ಸ್ಪರ್ಶನಕ್ಕೆ ಒತ್ತಡ, ಉಷ್ಣತೆ ಮುಂತಾದವು ಭೌತ ಪ್ರಚೋದಕಗಳೆನಿಸುತ್ತವೆ. ಮೇಲ್ಕಂಡ ಭೌತ ವಸ್ತುಗಳು ಇಂದ್ರಿಯ ಕ್ರಿಯೆಗಳನ್ನು ಪ್ರಚೋದಿಸಬಲ್ಲವಾದರೂ ಇಂದ್ರಿಯಾನುಭವವನ್ನು ನಿರ್ಧರಿಸುವಲ್ಲಿ ಜೀವಿಯ ಶಾರೀರಕ ಮತ್ತು ಮಾನಸಿಕ ಸ್ಥಿತಿಗತಿಗಳೂ ಆಂತರಿಕ ಪ್ರಚೋದಕಗಳಾಗಿ ಕಾರ್ಯನಿರ್ವಹಿಸುವುದು ಗಮನಾರ್ಹ ಅಂಶ. 
ಹಲವು ಪ್ರಚೋದಕಗಳು ಏಕಕ್ಷಣದಲ್ಲಿ ಜೀವಿಯನ್ನು ತಟ್ಟುತ್ತವೆ. ಅಲ್ಲದೆ, ಅವುಗಳಲ್ಲಿ ಒಂದೊಂದು ತಮ್ಮ ಸ್ವಭಾವಕ್ಕನುಗುಣವಾಗಿ ವಿಶಿಷ್ಟ ವರ್ತನ ವಿನ್ಯಾಸವನ್ನು ಪ್ರಚೋದಿಸುತ್ತವೆ. ಹೀಗಿದ್ದರೂ ಈ ಎಲ್ಲ ಸಂಕೀರ್ಣ ರೂಪದ ಪ್ರಚೋದಕಗಳನ್ನು ನಿಯಂತ್ರಿಸುವ ಶಕ್ತಿ ತಂತುಮಂಡಲಕ್ಕಿದೆ. 
ಪ್ರಚೋದಕ ವಸ್ತು ಮತ್ತು ಪ್ರಚೋದಕಗಳ ನಡುವೆ ಭೇದವಿದೆ. ಉದಾಹರಣೆಗೆ ಮಗುವಿನ ಕಣ್ಣಿಗೆ ಸ್ವಲ್ಪ ದೂರವಿರುವ ಕೆಂಪು ಚೆಂಡೊಂದು ಪ್ರಚೋದಕ ವಸ್ತುವಾದರೆ, ಆ ಚೆಂಡಿನಿಂದ ಹೊರಸೂಸಲ್ಪಟ್ಟ ಬೆಳಕಿನ ಕಿರಣ ವಿನ್ಯಾಸ ಅಕ್ಷಿಪಟಲವನ್ನು ತಟ್ಟಿ ಉತ್ತೇಜಿಸಿದಾಗ ಅದು ಪ್ರಚೋದಕವೆನಿಸುತ್ತದೆ. ಚೆಂಡಿನಿಂದ ಹೊರಟ ಬೆಳಕು ಅಕ್ಷಿಪಟಲವನ್ನು ಸೇರುವ ಮೊದಲು ಮಧ್ಯಂತರ ಸ್ಥಳದ ಮೂಲಕ ಪ್ರವಹಿಸುವಾಗ ಇತರ ಬೆಳಕಿನೊಂದಿಗೆ ಬೆರೆಯಬಹುದು. ಹೀಗಾಗಿ ಅಕ್ಷಿಪಟಲವನ್ನು ಸೇರುವ ವೇಳೆಗೆ ಮೂಲತರಂಗ ವಿನ್ಯಾಸದಲ್ಲಿ ಸ್ವಲ್ಪ ಮಾರ್ಪಾಡಾಗಬಹುದು. ಹೀಗೆ ಮಾರ್ಪಟ್ಟ ಬೆಳಕಿನ ಕಿರಣ ವಿನ್ಯಾಸವು ಅಕ್ಷಿಪಟಲದಲ್ಲಿ ಉಂಟುಮಾಡುವ ಪ್ರಚೋದನೆ ಅಕ್ಷಿಪಟಲದ ರಚನೆ ಮತ್ತು ಕ್ರಿಯೆ ಹಾಗೂ ಜೀವಿಯ ಹಿಂದಿನ ಅನುಭವಗಳನ್ನು ಅನುಸರಿಸಿ ಆಗುತ್ತದೆ. ಈ ಕಾರಣದಿಂದಾಗಿ ಒಂದು ವಸ್ತುವನ್ನು ಹಲವರು ನೋಡಿದಾಗ ಹಲವು ರೀತಿ ಕಾಣುವ ಸಾಧ್ಯತೆ ಇದೆ. ಇದಕ್ಕೆ ವಿಪರೀತವೆನಿಸುವ ಅನುಭವವೂ ಸಾಧ್ಯ. ಒಂದು ಇಂದ್ರಿಯವನ್ನು ಉತ್ತೇಜಿಸುವ ಪ್ರಚೋದಕಗಳು ಹಲವು ಪ್ರಚೋದಕ ವಸ್ತುಗಳಿಂದ ಬಂದಿರಬಹುದು. ಇಷ್ಟು ಮಾತ್ರವಲ್ಲದೆ ಒಂದು ಗೊತ್ತಾದ ಪ್ರಚೋದಕ ವಸ್ತುವಿಲ್ಲದಾಗಲೂ ಆ ವಸ್ತುವಿನಿಂದ ಉಂಟಾಗಬಹುದಾದಂಥ ಪ್ರಚೋದಕ ವಿನ್ಯಾಸವನ್ನು ಕೃತಕವಾಗಿ ನಿರ್ಮಿಸಿದಾಗ, ಆ ವಸ್ತುವನ್ನು ಕಾಣಲು ಸಾಧ್ಯ. ಉದಾಹರಣೆಗೆ ಸೇಬನ್ನು ನೋಡಿದಾಗ ಪಡೆಯಬಹುದಾದ ಬೆಳಕಿನ ವಿನ್ಯಾಸದಂಥ ಪ್ರಚೋದಕವನ್ನು ಕೃತಕವಾಗಿ ಕೊಟ್ಟಾಗ ಇಲ್ಲದ ಸೇಬನ್ನು ಕಾಣಲು ಸಾಧ್ಯ.
ಪ್ರಚೋದಕಗಳು ನಾನಾ ರೀತಿಯಲ್ಲಿ ಜೀವಿಯ ವರ್ತನೆಗೆ ಕಾರಣವಾಗುತ್ತವೆ. ಪ್ರಚೋದಕ ವರ್ತನೆ (ಪ್ರ-ವ; S-ಖ) ಸೂತ್ರದ ಪ್ರಕಾರ ವರ್ತನೆಗೆ ಪ್ರಚೋದಕ ನೇರವಾಗಿ ಕಾರಣವಾಗುತ್ತದೆ. ಆದರೆ, ಸೂತ್ರ ಸಮರ್ಪಕವಲ್ಲವೆಂದು ಕೆಲವು ಮನೋವಿಜ್ಞಾನಿಗಳು ಪ್ರಚೋದಕ - ಜೀವಿ - ವರ್ತನೆ (ಪ್ರ-ಜೀವ ; S-ಔ-ಖ) ಸೂತ್ರವನ್ನು ರೂಪಿಸಿದರು. ಈ ಸೂತ್ರದ ಪ್ರಕಾರ ಯಾವುದೇ ಪ್ರಚೋದಕವಾದರೂ ಜೀವಿಯ ಮಾನಸಿಕ ಸ್ಥಿತಿಗತಿಗಳಿಗನುಗುಣವಾಗಿ ವರ್ತನೆಯನ್ನು ಉತ್ತೇಜಿಸುತ್ತದೆ.
ಸಾಪೇಕ್ಷವಾಗಿ ಸರಳವೆನಿಸುವ ಇಂದ್ರಿಯಾನುಭವಗಳಲ್ಲಿ ಮಾತ್ರವಲ್ಲದೆ, ಜಟಿಲ ಹಾಗೂ ಹೆಚ್ಚು ಗತಿಶೀಲವೆನಿಸುವ ನಾನಾರೀತಿಯ ದೈಹಿಕ, ಮಾನಸಿಕ ಮತ್ತು ಮನೋದೈಹಿಕ ವರ್ತನೆಗಳಲ್ಲೂ ಪ್ರಚೋದಕಗಳ ಪಾತ್ರ ಮುಖ್ಯ. ವ್ಯಕ್ತಿಯ ಅವಧಾನ ಪ್ರತ್ಯಕ್ಷಣ. ಕಲಿಕೆ, ಆಲೋಚನೆ, ಅಭಿಪ್ರೇರಣೆ ನೆನಪು ಮುಂತಾದ ಪ್ರಕ್ರಿಯೆಗಳಲ್ಲಿ ಪ್ರಚೋದಕಗಳ ಪಾತ್ರದ ಬಗ್ಗೆ ಅಧ್ಯಯನಗಳು ನಡೆದು ಅನೇಕ ಸ್ವಾರಸ್ಯಕರ ಸಂಗತಿಗಳು ಬೆಳಕಿಗೆ ಬಂದಿವೆ.
ಅವಧಾನದ ಪ್ರಚೋದಕಗಳು ಹಲವು. ಅವುಗಳಲ್ಲಿ ಬಾಹ್ಯ ಮತ್ತು ಆಂತರಿಕವೆಂದು ಎರಡು ವಿಧ. ಹೊರಗಿನ ಬೆಳಕು ಶಬ್ದ ಮುಂತಾದುವು ಬಾಹ್ಯ ಪ್ರಚೋದಕಗಳೆನಿಸಿದರೆ, ಆಸಕ್ತಿ, ಅಭಿಪ್ರೇರಣೆ, ನೆನಪು ಮುಂತಾದುವು ಆಂತರಿಕ ಪ್ರಚೋದಕಗಳೆನಿಸುತ್ತವೆ. ಬೆಳೆಯುತ್ತಿರುವ ಶಿಶುವಿನ ಗಮನವನ್ನು ಸೆಳೆಯುವ ಪ್ರಚೋದಕಗಳು ಅದರ ಸಾಮಾಜಿಕ ಮತ್ತು ಮಾನಸಿಕ ಬೆಳೆವಣಿಗೆಗೆ ಅತ್ಯಂತ ಮಹತ್ವಪೂರ್ಣವಾದುವು. ಪ್ರಚೋದಕಗಳನ್ನು ಆಯ್ಕೆ ಮಾಡುವುದು ಶಿಶುವಿನ ಸಹಜ ಪ್ರಕ್ರಿಯೆ ಎನಿಸಿದರೂ ಕೆಲವು ರೀತಿಯ ಪ್ರಚೋದಕಗಳು ಅದನ್ನು ಹೆಚ್ಚು ಆಕರ್ಷಿಸುತ್ತವೆ ಎಂಬುದನ್ನು ಮರೆಯಲಾಗದು. ಕ್ಷಣಿಕವೆನಿಸುವ ಸ್ವಲ್ಪ ಸಮಯದವರೆಗೆ ಉಳಿಯುವ ಹಾಗೂ ಹೊಸ ಹೊಸ ಪ್ರಚೋದಕಗಳು ಶಿಶುವಿನ ಗಮನವನ್ನು ಹೆಚ್ಚು ಸೆಳೆಯುತ್ತವೆ. ಅಂಥ ಪ್ರಚೋದಕಗಳು ಇಂದ್ರಿಯ ಸಂವೇದನೆಯನ್ನು ಹೆಚ್ಚಿಸುವುದೇ ಇದಕ್ಕೆ ಪ್ರಮುಖ ಕಾರಣ. ಉದಾಹರಣೆಗೆ ಮೊಲೆ ಕುಡಿಯುವುದರಲ್ಲಿ ನಿರತವಾಗಿರುವ ಶಿಶು ವಿಶಿಷ್ಟ ಶಬ್ದವೊಂದನ್ನು ಕೇಳಿದಾಗ ತನ್ನ ಕತ್ತು ಹೊರಳಿಸಬಹುದು ಅಥವಾ ಇನ್ನೂ ಹೆಚ್ಚು ಬಿರುಸಿನಿಂದ ಮೊಲೆಯುಣ್ಣಲು ತೊಡಗಬಹುದು. ಶಿಶು ಬೆಳೆದಂತೆಲ್ಲ ಗಮನ ಸೆಳೆಯುವ ಪ್ರಚೋದಕಗಳಲ್ಲಿ ಬದಲಾವಣೆ ಕಂಡುಬರುತ್ತವೆ. ಇದಕ್ಕೆ ಕಲಿಕೆ ಪ್ರಮುಖ ಕಾರಣ. ಸಾಮಾಜಿಕ ನಿಯಂತ್ರಣಗಳ ಪ್ರಭಾವದಿಂದ ವ್ಯಕ್ತಿಯಲ್ಲಿ ಬೆಳೆಯುವ ಅಭಿವೃತ್ತಿ, ಪೂರ್ವಾಗ್ರಹ, ಜೀವನಮೌಲ್ಯ ಇತ್ಯಾದಿಗಳು ಬರುಬರುತ್ತ ಅವಧಾನ ಪ್ರಚೋದನೆಗೆ ಗಣನೀಯ ಕಾರಣಗಳಾಗುತ್ತವೆ.
ಪ್ರಾತ್ಯಕ್ಷಿಕ ಸಂಘಟನೆಯ ಮೇಲೆ ಪ್ರಚೋದಕ ವಿನ್ಯಾಸದ ಸ್ಥಿರತೆ ಮತ್ತು ಬದಲಾವಣೆಗಳು ಪ್ರಭಾವ ಬೀರಿ ಅದರಲ್ಲಿ ವ್ಯತ್ಯಯ ಉಂಟುಮಾಡುತ್ತವೆ. ವ್ಯತಿಕ್ರಮ ಸಾಧ್ಯ ವಸ್ತುಗಳ ಪ್ರತ್ಯಕ್ಷಣದಲ್ಲಿ ಪ್ರಚೋದಕ ವಿನ್ಯಾಸದ ಬದಲಾವಣೆ ಪ್ರಮುಖ ಅಂಶ (ಉದಾ : ವ್ಯತಿಕ್ರಮ ಸಾಧ್ಯ ಪುಸ್ತಕಾಕೃತಿ). ಒಂದೇ ಹಿನ್ನೆಲೆಯ ಮೇಲಿರುವ ಆ-ಕೃತಿಯ ಎರಡು ಪರ್ಯಾಯ ರೂಪಗಳು (ಉದಾ : ಅರ್ಧ ತೆರೆದ ಮತ್ತು ಅರ್ಧ ಮುಚ್ಚಿದ ಪುಸ್ತಕ) ಪ್ರಾತ್ಯಕ್ಷಿಕ ಸಂಘಟನೆಯಲ್ಲಿ ವ್ಯತ್ಯಯ ಉಂಟುಮಾಡುತ್ತವೆ. ಪ್ರಾತ್ಯಕ್ಷಿಕ ಕ್ಷೇತ್ರದ ವಿವಿಧ ಭಾಗಗಳು ಹೆಚ್ಚುಹೆಚ್ಚು ಸಂಘಟಿತವಾದಷ್ಟೂ ಪ್ರತ್ಯಕ್ಷದಲ್ಲಿ ಆಗುವ ಬದಲಾವಣೆ ಕಡಿಮೆ. ಪ್ರತ್ಯಕ್ಷಣದ ಸುಸಂಘಟನೆಗೆ ಹೆಚ್ಚು ಸುಪ್ರಷ್ಟ ಪ್ರಚೋದಕಗಳು ಅವುಗಳ ಸಮೂಹನ ಪ್ರವೃತ್ತಿಗಳು ಪ್ರಮುಖ ಕಾರಕಗಳು. ಅಲ್ಲದೆ, ವ್ಯಕ್ತಿಯ ಮಾನಸಿಕ ಒಲವು ಅಭಿಪ್ರೇರಣೆಯ ಮಟ್ಟ ಇಂದಿನ ಅನುಭವ ಸಂವೇಗ ಸ್ಥಿತಿ ಮುಂತಾದವು ಆಂತರಿಕ ಪ್ರಚೋದಕಗಳಾಗಿ ಪ್ರತ್ಯಕ್ಷಣೆಯನ್ನು ನಿರ್ಧರಿಸುತ್ತವೆ.
ಅನುಬಂಧನ ಪ್ರಕ್ರಿಯೆಯಲ್ಲಿ ಪ್ರಚೋದಕಗಳ ಪಾತ್ರವನ್ನು ನಿರ್ದಿಷ್ಟವಾಗಿ ಗುರುತಿಸಬಹುದು. ಇಲ್ಲಿ ಮುಖ್ಯವಾಗಿ ಅನುಬಂಧಿತ ಮತ್ತು ಅನನುಬಂಧಿತ ಎಂಬ ಎರಡು ಬಗೆಯ ಪ್ರಚೋದಕಗಳನ್ನು ಪ್ರಸ್ತಾಪಿಸಬಹುದು. ತನ್ನ ಸಹಜ ಗುಣದಿಂದ ಒಂದು ನಿರ್ದಿಷ್ಟ ಅನುಕ್ರಿಯೆಗೆ ಕಾರಣವಾಗುವ ವಸ್ತು ವಿಷಯ ಅನನುಬಂಧಿತ ಪ್ರಚೋದಕವೆನಿಸುತ್ತದೆ (ಉದಾ : ಬಾಯಲ್ಲಿರುವ ಆಹಾರ ಜೊಲ್ಲಿಗೆ ಕಾರಣವಾಗುವುದು ಅಥವಾ ಆಧಾರ ತಪ್ಪಿದಾಗ ಹೆದರಿಕೆ ಉಂಟಾಗುವುದು). ಯಾವುದಾದರೂ ಅನನುಬಂಧಿತ ಪ್ರಚೋದಕದೊಂದಿಗೆ ಸ್ವಲ್ಪ ಕಾಲ ಸಹವರ್ತಿಸುವ ಪ್ರಚೋದಕ, ಮೊದಲಿನದು ಊಟ ಮಾಡುವಂಥ ಅನುಕ್ರಿಯೆಯನ್ನು ಉಂಟುಮಾಡುವ ಶಕ್ತಿಯನ್ನು ಪಡೆದುಕೊಂಡಾಗ ಅನುಬಂಧಿತ ಪ್ರಚೋದಕವೆನಿಸುತ್ತದೆ (ಉದಾ : ಆಹಾರ ಕೊಡುವಾಗ ಪ್ರತಿ ಸಲ ಗಂಟೆ ಹೊಡೆದಾಗ, ಬಲವಾದ ಸಹವರ್ತನೆಯ ಫಲವಾಗಿ ಗಂಟೆ ಹೊಡೆದ ಕೂಡಲೇ ಜೊಲ್ಲು ಉತ್ಪತ್ತಿಯಾಗುವುದು). ನಾನಾ ರೀತಿಯ ಪ್ರಯೋಗಗಳ ಮೂಲಕ ಹಲವು ಅನುಬಂಧಿತ ಪ್ರಚೋದಕಗಳನ್ನು ಪ್ರಕಾಶಪಡಿಸಲಾಗಿದೆ. ನಮ್ಮ ನಿತ್ಯ ಜೀವನದಲ್ಲಿ ರೂಪಗೊಳ್ಳುವ ಅನುಬಂಧಿತ ಪ್ರಚೋದಕಗಳಿಗೆ ಲೆಕ್ಕವೇ ಇಲ್ಲವೆಂದು ಹೇಳಬಹುದು.
ನೆನಪಿಗೂ ಯುಕ್ತ ಪ್ರಚೋದಕಗಳ ಅಗತ್ಯವಿದೆ. ನಮ್ಮ ಹಲವು ಹಳೆಯ ಅನುಭವಗಳನ್ನೂ ಸಮಯಕ್ಕೆ ತಕ್ಕಂತೆ ನೆನಪಿಗೆ ತಂದುಕೊಳ್ಳಲು ಪರಿಣಾಮಕಾರಿ ಪ್ರಚೋದಕಗಳನ್ನು ಬಳಸಬೇಕಾಗುತ್ತದೆ. ಅಂಥ ಪ್ರಚೋದಕಗಳು ಶಬ್ದ ಸಂಕೇತ ಘಟನೆ ಅಥವಾ ವ್ಯಕ್ತಿಯ ರೂಪದಲ್ಲಿರಬಹುದು. ಅಲ್ಲದೆ ಅದು ಒಂದು ವಿಧಾನ ಅಥವಾ ತಂತ್ರವಾಗಿರಬಹುದು. ಉದಾಹರಣೆಗೆ ಸುಪ್ತ ಚೇತನದಲ್ಲಿ ಹುದುಗಿರುವ ಸಂಕಟಕಾರಿ ಅನುಭವಗಳನ್ನು ಹೊರತೆಗೆಯಲು ಸಂಮೋಹನೆ, ಮನೋವಿಶ್ಲೇಷಣೆ ವಿದ್ಯುತ್ ಪ್ರಚೋದನೆಗಳಂಥ ತಂತ್ರಗಳನ್ನು ಬಳಸಬಹುದು. 
ಅಭಿಪ್ರೇರಣೆಯನ್ನು ಕೆರಳಿಸುವಲ್ಲಿ ಪ್ರಚೋದಕಗಳ ಪಾತ್ರ ಮಹತ್ವಪೂರ್ಣವಾದ್ದು, ಅಂಥ ಪ್ರಚೋದಕಗಳು ಹಲವು. ರುಚಿ ವಾಸನೆ ಮಾಧುರ್ಯ ಮುಂತಾದ ಸುಖಕರ ಇಂದ್ರಿಯಾನುಭವಗಳು ; ಲೈಂಗಿಕ ಸುಖ, ಸ್ನಾಯುಕ್ರಿಯೆ ಭೋಗಸಾಧ್ಯ ವಸ್ತುವಾಹನಗಳು ; ಹೊಸ ಸೃಷ್ಟಿ, ಶೋಧನೆ, ಸಮಸ್ಯಾ ಪರಿಹಾರ, ಬದಲಾವಣೆ ಮುಂತಾದ ಸಾಮಾನ್ಯ ಅನುಭವಗಳು ಮತ್ತು ಘಟನೆಗಳು ; ಅನುರಾಗ ಸಂಗಸುಖ ಪರಹಿತ, ಕೀರ್ತಿ, ಸ್ಥಾನಮಾನ ಮುಂತಾದ ಸಾಮಾಜಿಕ ಘಟನೆಗಳು ಅಭಿಪ್ರೇರಣೆಯನ್ನು ಉತ್ತೇಜಿಸಬಲ್ಲ ಪ್ರಚೋದಕಗಳೆನಿಸುತ್ತವೆ. ಅವು ಅಭಿಪ್ರೇರಣೆಯ ಸತ್ವವನ್ನು ಹೆಚ್ಚಿಸುವುದರ ಜೊತೆಗೆ ಅದು ಮುಂದುವರೆಯಲು ನೆರವಾಗುತ್ತದೆ. ಸಹಜ ರೀತಿಯಲ್ಲಿ ಬೆಳೆದ ವಯಸ್ಕ ವ್ಯಕ್ತಿಯಲ್ಲಿ ಲೈಂಗಿಕ ಅಭಿಪ್ರೇರಣೆಯುಂಟಾಗಲು ಬಾಹ್ಯ ಪ್ರಚೋದಕಗಳು ಗಣನೀಯ ಪಾತ್ರ ವಹಿಸುತ್ತವೆ. ದೃಷ್ಟಿ ಶ್ರವಣ ಮತ್ತು ವಾಸನೆಗಳಿಗೆ ಸಂಬಂಧಿಸಿದ ಪ್ರಚೋದಕಗಳು, ಸ್ಥಳ ಸಮಯ ಮತ್ತು ಇಚ್ಫಿತ ವ್ಯಕ್ತಿಗಳನ್ನನುಸರಿಸಿ, ಲೈಂಗಿಕ ಅಭಿಪ್ರೇರಣೆಯ ಮೇಲೆ ಪ್ರಭಾವ ಬೀರುತ್ತವೆ. ಅಲ್ಲದೆ, ಅವುಗಳ ಪಾತ್ರವನ್ನು ನಿರ್ಧರಿಸುವಲ್ಲಿ ಕಲಿಕೆಯ ಪಾತ್ರ-ಪ್ರಧಾನವಾದ್ದು. ಕಾಮ ವಿದ್ಯೆಯ ಬೆಳೆವಣಿಗೆ ಈ ಅಂಶವನ್ನು ಸಮರ್ಥಿಸುತ್ತದೆ.
ಸಾಮಾಜಿಕ ಪ್ರಚೋದಕಗಳು, ಮಾನಸಿಕ ಶಕ್ತಿ ಸಾಮಥ್ರ್ಯಗಳ ಬೆಳೆವಣಿಗೆಯ ಮೇಲೆ ಗಣನೀಯ ಪ್ರಭಾವ ಬೀರುವುದು ಪ್ರಯೋಗಗಳಿಂದ ಬೆಳಕಿಗೆ ಬಂದಿದೆ. ಶೈಶವದಲ್ಲಿ ತಾಯಿಯ ಲಾಲನೆ ಪಾಲನೆಯಲ್ಲಿ ಬೆಳೆಯುವ ಮಕ್ಕಳ ಮತ್ತು ಅನಾಥಾಲಯಗಳಲ್ಲಿ ಬೆಳೆಯುವ ಮಕ್ಕಳ ಸಾಮಾಜಿಕ ನೈಪುಣ್ಯಗಳಲ್ಲಿ ಗಣನೀಯ ವ್ಯತ್ಯಾಸ ಕಂಡುಬರುತ್ತದೆ. ಅನಾಥಾಲಯಗಳಲ್ಲಿ ಮಕ್ಕಳಿಗೆ ಸ್ವಲ್ಪ ಮಟ್ಟಿಗೆ ದೈಹಿಕ ಪೋಷಣೆ ದೊರೆತರೂ, ಮಮತೆ ಸ್ವೀಕಾರ ಸ್ನೇಹ ಮಾನ್ಯತೆ ಮುಂತಾದ ಸಾಮಾಜಿಕ ಪ್ರಚೋದಕಗಳಿಂದ ಅವರು ವಿರಹಿತರಾಗುವ ಸಾಧ್ಯತೆ ಹೆಚ್ಚು. ತಾಯಿ ಶಿಶುವಿನೊಂದಿಗೆ ಕಳೆಯುವ ಅವಧಿಗೂ, ಮಕ್ಕಳ ಬುದ್ಧಿ ಮಟ್ಟಕ್ಕೂ 0.65 ರಷ್ಟು ಸಹಸಂಬಂಧವಿರುವುದು ಕಂಡುಬಂದಿದೆ. ಸ್ಕೀಲ್ಸ್ (1966) ಮುಂತಾದವರ ಪ್ರಯೋಗಗಳಿಂದ ಈ ಅಂಶ ಸ್ಥಿರಪಟ್ಟಿದೆ. ಹೆಚ್ಚು ಸಂಪದ್ಯುಕ್ತ ಸಾಮಾಜಿಕ ಪ್ರಚೋದನೆ ಮಕ್ಕಳ ಬೆಳೆವಣಿಗೆಯನ್ನು ತ್ವರಿತಗೊಳಿಸಬಲ್ಲದು ಆದರೆ, ಯಾವುದೇ ಪ್ರಚೋದನೆ ಎಲ್ಲ ಮಕ್ಕಳ ಮೇಲೂ ಒಂದೇ ರೀತಿ ಪ್ರಭಾವ ಬೀರದಿರಬಹುದು. ವ್ಯಕ್ತಿ ಪ್ರತ್ಯಕ್ಷಣದ ಮೇಲೆ, ಸಾಮಾಜಿಕ ಮೌಲ್ಯ ನಡೆನುಡಿ ನಿರೀಕ್ಷಣೆ ಮುಂತಾದ ಪ್ರಚೋದಕಗಳು ಪ್ರಭಾವ ಬೀರಬಲ್ಲವು ಉದಾಹರಣೆಗೆ ನಮ್ಮಲ್ಲಿ ನೆಲೆ ನಿಂತಿರಬಹುದಾದ ಮನೋಮುದ್ರೆಗಳು ವ್ಯಕ್ತಿಗಳ ಬಗ್ಗೆ ತಪ್ಪು ಕಲ್ಪನೆ ಕೊಡಬಹುದು. ಜರ್ಮನ್ನರು ವಿಜ್ಞಾನ ಪ್ರಿಯರು, ಭಾರತೀಯರು ಸೋಮಾರಿಗಳು, ಫ್ರೆಂಚರು ಸುಖಾಪೇಕ್ಷಿಗಳು - ಇವೇ ಮುಂತಾದ ಮನೋಮುದ್ರೆಗಳು ಆಯಾ ದೇಶದ ವ್ಯಕ್ತಿಗಳ ಬಗ್ಗೆ ತಪ್ಪು ಕಲ್ಪನೆ ಕೊಡುವ ಸಾಧ್ಯತೆ ಹೆಚ್ಚು. 
ಸಾಮೂಹಿಕ ಪ್ರಚೋದಕಗಳೂ ವರ್ತನೆಯ ಮೇಲೆ ಗಣನೀಯ ಪ್ರಭಾವ ಬೀರುತ್ತವೆ. ಉದಾಹರಣೆಗೆ ದೊಂಬಿಯಲ್ಲಿ ಸೇರಿರುವ ವ್ಯಕ್ತಿ ಪ್ರಭಾವತ ಶಾಂತ ಚಿತ್ತನಾಗಿರುತ್ತಿದ್ದರೂ, ಸಾಮೂಹಿಕ ಪ್ರಚೋದನೆಗೆ ಒಳಗಾಗಿ ಕ್ರೋಧೋನ್ಮತ್ತನಾಗಿ ದೌರ್ಜನ್ಯ ಕೃತ್ಯಗಳಲ್ಲಿ ತೊಡಗಬಹದು. ತದ್ವಿರುದ್ಧವಾಗಿ ಸಾಮೂಹಿಕ ಪ್ರಾರ್ಥನೆ ವಿಚಾರ ವಿನಿಮಯ ಮುಂತಾದುವು ಸಂಬಂಧಪಟ್ಟವರನ್ನು ಹೆಚ್ಚು ರಚನಾತ್ಮಕ ಕಾರ್ಯಗಳಿಗೆ ಪ್ರಚೋದಿಸಬಲ್ಲುವು. ಸಾಮಾಜಿಕ ಪ್ರೋತ್ಸಾಹ ಪ್ರಬಲ ಪ್ರಚೋದಕ. ಸತ್ಸಂಗ ಉತ್ತಮ ಸಾಮಾಜಿಕ ಪ್ರಚೋದಕವೆಂಬುದರಲ್ಲಿ ಭಿನ್ನಾಭಿಪ್ರಾಯವಿಲ್ಲ. ಇಲ್ಲಿ ವ್ಯಕ್ತಿಗಳೇ ಪ್ರಚೋದಕಗಳಾಗುತ್ತಾರೆ. ಒಬ್ಬ ವಿಶಿಷ್ಟ ವ್ಯಕ್ತಿಯತ್ತ ಒಲವನ್ನು ಬೆಳೆಸಿಕೊಂಡಾಗ ಆತನ ಜೊತೆ ಸಿಕ್ಕಿದಾಗಲೆಲ್ಲ ಸಂಬಂಧಪಟ್ಟ ವ್ಯಕ್ತಿ ಹೆಚ್ಚು ಪ್ರಚೋದಿತನಾಗುತ್ತಾನೆ. ಇಷ್ಟು ಮಾತ್ರವಲ್ಲ, ನಾವು ಇಷ್ಟಪಡುವ ವ್ಯಕ್ತಿಯ ಪ್ರತಿನಿಧಿಯ ಸಂಪರ್ಕವಾದಾಗಲೂ ನಮ್ಮ ಸಾಮಾನ್ಯ ಅಭಿಪ್ರೇರಣೆಯ ಮಟ್ಟ ಹೆಚ್ಚುತ್ತದೆ. 
ಆಂತರಂಗಿಕ ಪ್ರಚೋದಕಗಳ ಜೊತೆಗೆ ಬಾಹ್ಯ ಪ್ರಚೋದಕಗಳು ಕನಸಿನ ಮೇಲೆ ಪ್ರಭಾವ ಬೀರುವುದು ಪ್ರಯೋಗಗಳಿಂದ ಬೆಳಕಿಗೆ ಬಂದಿವೆ. ನಿದ್ದೆಯಲ್ಲಿ ತ್ವರಿತಗತಿಯ ಕಣ್ಣು ಚಲನೆಗಳು ಇದ್ದಾಗ ಕೆಲವು ಬಾಹ್ಯ ಪ್ರಚೋದಕಗಳನ್ನು ಕೊಟ್ಟಾಗ ಅವನು ಸಂಬಂಧಪಟ್ಟ ವ್ಯಕ್ತಿ ಅನೇಕ ವೇಳೆ ತನ್ನ ಕನಸಿಗೆ ಅಳವಡಿಸಿಕೊಳ್ಳುವುದು ಕಂಡುಬಂದಿದೆ. ಉದಾಹರಣೆಗೆ, ಝೇಂಕಾರ ಧ್ವನಿಯನ್ನು ಮಾಡಿದಾಗ ಕನಸಿನಲ್ಲಿ ಆತನಿಗೆ ವಿಮಾನದ ಶಬ್ದದಂತೆ ತೋರುತ್ತದೆ. ಮಲಗಿರುವ ಮಂಚದಿಂದ ಕೆಳಗಿಳಿಸಿದಾಗ ಪ್ಯಾರಾಶೂಟಿನ ನೆರವಿನಿಂದ ಕೆಳಗೆ ಬೀಳುತ್ತಿರುವಂತೆ ತೋರುತ್ತದೆ. ಆದರೆ, ಕನಸಿನಲ್ಲಿ ಬಾಹ್ಯ ಪ್ರಚೋದಕಗಳಿಗಿಂತ ಅಂತರಂಗಿಕ ಪ್ರಚೋದಕಗಳ (ಉದಾಹರಣೆ : ಅತೃಪ್ತ ಆಸೆ) ಪ್ರಾಬಲ್ಯ ಹೆಚ್ಚೆಂಬುದನ್ನು ಮರೆಯಲಾಗದು.)
ವ್ಯಕ್ತಿಯ ವರ್ತನೆ ಪರಿಣಾಮಕಾರಿಯಾಗಬೇಕಾದರೆ ಸಾಕಷ್ಟು ಪ್ರಚೋದನೆ ಇರಬೇಕಾಗುತ್ತದೆ. ಒಂದು ಪಕ್ಷ ಪ್ರಚೋದನೆಯ ಮಟ್ಟ ಕಡಿಮೆಯಾದರೆ ಆತ ಸಂಕಟ ಸ್ಥಿತಿಗೆ ಒಳಗಾಗುತ್ತಾನೆ. ಬೆಳಕು ಶಬ್ದಗಳಂಥ ಸರಳ ಪ್ರಚೋದಕಗಳು ಕಡಿಮೆಯಾದಾಗ ಸುಸ್ಪಷ್ಟ ವಿಭ್ರಮೆಗಳು ಕಿರಿಕಿರಿ ಭಾವ, ಬಾಲಿಶ ಹಾಗೂ ಅವ್ಯವಸ್ಥಿತ ಆಲೋಚನೆಗಳು ಮುಂತಾದ ಕಳವಳಕಾರದ ಪರಿಣಾಮಗಳು ಉಂಟಾಗುತ್ತವೆ. ಅಲ್ಲದೆ, ಇಡೀ ಮಸ್ತಿಷ್ಕ ವ್ಯಾಪಾರಗಳನ್ನು ಅಸ್ತವ್ಯಸ್ತಗೊಳಿಸುವಂಥ ಮದ್ದು ಪ್ರಭಾವ ಅಥವಾ ಗಾಯಗಳಿಂದ ಉಂಟಾಗುವಂಥ ಬದಲಾವಣೆಗಳು ಮಸ್ತಿಷ್ಕ ತರಂಗಗಳಲ್ಲಿ ಕಂಡುಬರುತ್ತವೆ. ಹಸಿವು ಬಾಯಾರಿಕೆಗಳಂಥ ಶಾರೀರಕ ಪ್ರಚೋದನೆಗಳಲ್ಲೂ ಪ್ರೀತಿ ವಿಶ್ವಾಸಗಳಂಥ ಮಾನಸಿಕ ಪ್ರಚೋದಕಗಳಲ್ಲೂ ಕೊರತೆಯುಂಟಾದಾಗ ಇಂಥ ಕೆಟ್ಟ ಪರಿಣಾಮಗಳು ಉಂಟಾಗುತ್ತವೆ. ಆದ್ದರಿಂದ ವ್ಯಕ್ತಿ ತನ್ನ ಸಹಜ ಶಕ್ತಿ ಸಾಮಥ್ರ್ಯಗಳಿಗೆ ಅನುಗುಣವಾಗಿ ಪರಿಣಾಮಕಾರಿಯಾಗಿ ವ್ಯವಹರಿಸಲು ವೈವಿಧ್ಯಪೂರ್ಣ ಹಾಗೂ ಯುಕ್ತ ಪ್ರಚೋದನೆ ಅತ್ಯಗತ್ಯ. ಈ ದೃಷ್ಟಿಯಿಂದ ನೋಡಿದಾಗ ನಮ್ಮ ಜನರ ಹತಾಶ ಸ್ಥಿತಿಯನ್ನು ಹೋಗಲಾಡಿಸಲು ಪ್ರಬಲ ಪ್ರಚೋದನೆಗಳನ್ನು ನಮ್ಮ ರಾಜಕೀಯ ಆರ್ಥಿಕ ಮತ್ತು ಸಾಂಸ್ಕøತಿಕ ಜೀವನ ಕ್ಷೇತ್ರಗಳಲ್ಲಿ ಸಮರ್ಪಕವಾಗಿ ಅಳವಡಿಸಬೇಕಾಗುತ್ತದೆ.
(ಡಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ